ದೇವಪುರ ಬಳಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ – ಹಲವರಿಗೆ ಗಾಯ

Posted by

ಸುದ್ದಿ ಬೆಳಕು ವಾರ್ತೆ

ಸುರಪುರ : ಜಿಲ್ಲೆಯ ಸುರಪುರ ತಾಲೂಕಿನ ದೇವಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹೆದ್ದಾರಿಯಿಂದ ಪಕ್ಕಕ್ಕೆ ಇಳಿದು ಅಪಘಾತಕ್ಕೀಡಾದ ಪರಿಣಾಮ ಹಲವರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ದಾವಣಗೆರೆಯಿಂದ ಕಲಬುರ್ಗಿ ಕಡೆಗೆ ತೆರಳುತ್ತಿದ್ದ ಕಲಬುರ್ಗಿ ಬಸ್ ಘಟಕ ಸಂಖ್ಯೆ–3ರ ಬಸ್‌ನ್ನು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದಿದೆ ಎಂದು ತಿಳಿದು ಬಂದಿದೆ. ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಕ್ಷಣಾರ್ಧದಲ್ಲಿ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತು.
ಅಪಘಾತದಲ್ಲಿ ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಸುರಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಿರ್ವಾಹಕರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ನೆರವಿಗೆ ಧಾವಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದರು. ಕೆಲಕಾಲ ಹೆದ್ದಾರಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಈ ಘಟನೆ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಖಾಸಗಿ ಸ್ವೀಪರ್ ಕೋಚ್ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 9 ಮಂದಿ ಸಜೀವ ದಹನಗೊಂಡ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಮಾಸದಿರುವಾಗಲೇ ಮತ್ತೊಂದು ಬಸ್ ಅಪಘಾತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ.


“ಇಕ್ಕಟ್ಟಾದ ರಸ್ತೆ, ಅತಿವೇಗದ ವಾಹನ ಸಂಚಾರ ಹಾಗೂ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೇ ಅಪಘಾತಗಳಿಗೆ ಕಾರಣ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದೇವಪುರ ಭಾಗದ ಹೆದ್ದಾರಿಯನ್ನು ತಕ್ಷಣ ಅಗಲೀಕರಿಸಿ, ಅಪಘಾತ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku