
ಸುದ್ದಿ ಬೆಳಕು ವಾರ್ತೆ
ಹಿರಿಯೂರು : ಜಾತಿ ರಾಜಕಾರಣದ ಮಿತಿಗಳನ್ನು ಮೀರಿ, ವೈಯಕ್ತಿಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಪರೂಪದ ರಾಜಕಾರಣಿಯೊಬ್ಬರಾದ ಡಿ ಸುಧಾಕರ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಭೋವಿ ಗುರುಪೀಠದ ಜಗದ್ಗುರು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗಲಿದ ಸಚಿವರಾದ ಡಿ ಸುಧಾಕರ ಕುರಿತು ತಮ್ಮ ಶೋಕ ಸಂದೇಶ ಹಂಚಿಕೊಂಡಿರುವ ಶ್ರೀಗಳು, “ಅವರು ಕೇವಲ ಒಬ್ಬ ಜನಪ್ರತಿನಿಧಿಯಾಗಿರದೆ, ಜನರ ನೋವಿಗೆ ಮಿಡಿಯುವ ಸಹಾಯಹಸ್ತವಾಗಿದ್ದರು. ನಾಲ್ಕು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಜಾತ್ಯತೀತ ಪರಿಕಲ್ಪನೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಅವರ ಗುಣ ಎಲ್ಲರಿಗೂ ಮಾದರಿಯಾಗಿತ್ತು,” ಎಂದು ಸ್ಮರಿಸಿದ್ದಾರೆ.
ಕೊನೆಯ ಕ್ಷಣದ ನೆನಪು:
“ನಮ್ಮ ಮೀಸಲಾತಿ ಹೋರಾಟದ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಲು ಅವರು ಸರ್ಕಾರದ ಪರವಾಗಿ ಬಂದು ಮನವಿ ಸ್ವೀಕರಿಸಿದ್ದರು. ಆ ಕ್ಷಣವೇ ಅವರೊಂದಿಗೆ ಕಳೆದ ಕೊನೆಯ ಕ್ಷಣವಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಆನಂದದಾಯಕವಾಗಿರುತ್ತಿತ್ತು. ಅವರ ತಿಳಿಹಾಸ್ಯದ ವ್ಯಕ್ತಿತ್ವ ಸದಾ ನೆನಪಿನಲ್ಲಿ ಉಳಿಯುವಂತದ್ದು,” ಎಂದು ಶ್ರೀಗಳು ಅಂತಿಮ ನಮನ ಸಲ್ಲಿಸುವಾಗ ಭಾವುಕರಾಗಿ ನುಡಿದರು.
“ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ. ಆ ಪುಣ್ಯಾತ್ಮಕ್ಕೆ ಚಿರಶಾಂತಿ ದೊರೆಯಲಿ,” ಎಂದು ಜಗದ್ಗುರುಗಳು ಪ್ರಾರ್ಥಿಸಿದ್ದಾರೆ.










Leave a Reply