ಸಾರ್ವಜನಿಕರಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಿಸಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚನೆ

Posted by

ಯಾದಗಿರಿ ಬಿಸಿಗಾಳಿ ಎಚ್ಚರಿಕೆ ಮೇ 2026

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಸಾರ್ವಜನಿಕರಿಗೆ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಸಮರ್ಪಕವಾಗಿ ಹಾಗೂ ನಿಗದಿತ ದರದಲ್ಲಿ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಗ್ಯಾಸ್ ಏಜೆನ್ಸಿದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ಯಾಸ್ ಏಜೆನ್ಸಿದಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು, ಹೆಚ್ಚುವರಿ ದರ ವಸೂಲಿ ಮಾಡುವುದು ಅಥವಾ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದರೆ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಪೆಟ್ರೋಲಿಯಂ ವಸ್ತುಗಳ ಸಂಗ್ರಹ ಮತ್ತು ಬಳಕೆ ಕಾಯ್ದೆ-1999ರಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮನೆಮನೆಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಬೇಕು. ಗ್ರಾಮೀಣ ಭಾಗಗಳಲ್ಲೂ ಸಮಯಕ್ಕೆ ಸರಿಯಾಗಿ ವಿತರಣೆ ಆಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಾದ ಸೋಮಶೇಖರ ಬಿರಾದಾರ, ಜಿಲ್ಲೆಯ ಎಲ್ಲಾ 18 ಗ್ಯಾಸ್ ಏಜೆನ್ಸಿಯ ಪ್ರತಿನಿಧಿಗಳು ಹಾಗೂ ಆಹಾರ ಇಲಾಖೆಯ ತಾಲೂಕು ಮಟ್ಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದೇ ವೇಳೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಮೇ ಮತ್ತು ಜೂನ್-2026ರ ಎರಡು ತಿಂಗಳ ಆಹಾರ ಧಾನ್ಯವನ್ನು ಒಟ್ಟಿಗೆ ವಿತರಿಸಲು ಸರ್ಕಾರ ನಿರ್ದೇಶನ ನೀಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಸೂಚನೆಯಂತೆ ಮುಂಗಡವಾಗಿ ಆಹಾರ ಧಾನ್ಯ ಎತ್ತುವಳಿ ಮಾಡಿ ಮೇ ತಿಂಗಳಲ್ಲಿಯೇ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದೆ. ಅದರಂತೆ ಅಂತ್ಯೋದಯ (ಎಎವೈ) ಪಡಿತರ ಚೀಟಿದಾರರಿಗೆ ಒಟ್ಟು 70 ಕೆ.ಜಿ. ಅಕ್ಕಿ ಹಾಗೂ ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಎರಡು ತಿಂಗಳ ಪಡಿತರ ವಿತರಣೆಯಾಗುತ್ತಿರುವುದರಿಂದ ಫಲಾನುಭವಿಗಳು ಎರಡು ಬಾರಿ ಬಯೋಮೆಟ್ರಿಕ್ ದೃಢೀಕರಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಹೆಚ್ಚುವರಿ 5 ಕೆ.ಜಿ. ಆಹಾರ ಧಾನ್ಯವನ್ನು ಜೂನ್ ತಿಂಗಳಲ್ಲಿ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಒಂದು ರಾಷ್ಟ್ರ-ಒಂದು ಪಡಿತರ ಚೀಟಿ ಯೋಜನೆಯಡಿ ಯಾವುದೇ ರಾಜ್ಯದ ಫಲಾನುಭವಿಗಳು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ. ಪಡಿತರ ವಿತರಣೆಯಲ್ಲಿ ಕಡಿಮೆ ಪ್ರಮಾಣ ನೀಡುವುದು, ಹಣ ವಸೂಲಿ ಮಾಡುವುದು ಅಥವಾ ಇತರೆ ಅಕ್ರಮಗಳು ಕಂಡುಬಂದಲ್ಲಿ 1967 ಸಹಾಯವಾಣಿ ಸಂಖ್ಯೆಗೆ ದೂರು ನೀಡಬಹುದು ಎಂದು ತಿಳಿಸಿದರು.

ಇನ್ನು ಸರ್ಕಾರ ವಿತರಿಸುವ ಆಹಾರ ಧಾನ್ಯವನ್ನು ಅಕ್ರಮವಾಗಿ ಮಾರಾಟ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದರೆ ಸಂಬಂಧಿಸಿದ ಪಡಿತರ ಚೀಟಿಗೆ ದಂಡ ವಿಧಿಸುವುದರ ಜೊತೆಗೆ ಆರು ತಿಂಗಳ ಕಾಲ ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

Suddi Belaku