
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ನಗರ ಸೇರಿದಂತೆಯೇ ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಲ್ಲೂ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಅವರು, ತಕ್ಷಣವೇ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ
ಈ ಕುರಿತು ಹೇಳಿಕೆ ನೀಡಿರುವ ಅವರು, ಬೇಸಿಗೆ ಆರಂಭವಾಗಿ ಮೂರು ತಿಂಗಳೂ ಗತಿಸಿದರೂ ಜನರಿಗೆ ಮತ್ತು ಜಾನುವಾರುಗಳಿಗೆ ಶುದ್ದ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದೆ, ಜಾನುವಾರುಗಳಿಗೆ ಮೇವು ಸೇರಿದಂತೆಯೇ ನೀರು ಸಿಗುತ್ತಿಲ್ಲ. ಯಾದಗಿರಿ ಮತಕ್ಷೇತ್ರದಲ್ಲಿನ ನದಿ, ಹಳ್ಳ ಕೊಳ್ಳಗಳು ಬತ್ತುತ್ತಿವೆ. ಬೋರವೇಲ್‌ಗಳು ಕೆಟ್ಟಿವೆ. ಶುದ್ದ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದು ವರ್ಷಗಳೇ ಉರುಳಿವೆ. ಆದರೇ ಯಾದಗಿರಿ ಶಾಸಕರು ಕೇವಲ ಅಧಿಕಾರಿಗಳ ಸಭೆ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅತಿ ಹೆಚ್ಚು ಬಿಸಿಲು ರಾಚುತ್ತಿರುವ ಯಾದಗಿರಿ ನಗರ ಮತ್ತು ಹಳ್ಳಿಗಳಲ್ಲಿ ಜನಜೀವನ ಹದಗೆಡುತ್ತಿದೆ. ಬೆಳಗಾದರೇ ಜನ,ಜಾನುವಾರು ಕುಡಿಯುವ ನೀರು ಎಲ್ಲಿ ಸಿಗುತ್ತದೆ ಎಂದು ಹುಡುಕುವ ಸ್ಥಿತಿ ಎದುರಾಗಿದೆ. ಜನರು ಅನಿವಾರ್ಯವಾಗಿ ಕಲುಷಿತ ನೀರು ಕುಡಿದುನ ಆರೋಗ್ಯ ಕೆಡಿಸಿಕೊಳ್ಳುವಂತ ಪರಸ್ಥಿತಿ ಎದುರಾಗಿದ್ದರೂ ತಹಸಿಲ್ ದಾರರು, ತಾಪಂ ಇಒಗಳು ಮತ್ತು ಗ್ರಾಪಂ ಪಿಡಿಒಗಳು ಸಮರ್ಪಕ ಕೆಲಸ ಮಾಡುತ್ತಿಲ್ಲ. ಜನರ ಕೈಗೆ ಸಿಗುತ್ತಿಲ್ಲ, ಹಳ್ಳಿಗಳಲ್ಲಿ ಜನರು ದೂರವಾಣಿ ಮಾಡಿದರೇ ಎತ್ತಿ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಅನೇಕರಿಂದ ಕೇಳಿ ಬರುತ್ತಿವೆ ಎಂದು ಅವರು ವಿವರಿಸಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರವೂ ಮೂರು ತಾಲೂಕುಗಳಲ್ಲಿ ಹಂಚಿಹೋಗಿದೆ. ಯಾದಗಿರಿ ಮತ್ತು ಶಹಾಪುರ ತಾಲೂಕುಗಳಲ್ಲಿ ತಲಾ ಏಳು ಗ್ರಾಪಂ ಮತ್ತು ವಡಗೇರಾ ತಾಲೂಕಿನಲ್ಲಿ 17 ಗ್ರಾಪಂಗಳು ಬರುತ್ತವೆ. ನಗರದಲ್ಲಿನ ಬಹುತೇಕ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಗಲು ರಾತ್ರಿ ಎನ್ನದೇ ಜನರು ಕುಡಿಯುವ ನೀರಿಗಾಗಿ ಖಾಲಿಕೊಡಗಳೊಂದಿಗೆ ದೂರ, ದೂರ ಹೋಗಿ ನೀರು ತರುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಆದರೂ ಶಾಸಕರು, ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಕುಂಭಕರ್ಣನ ನಿದ್ದೆಯಲ್ಲಿ ಇದ್ದಾರೆ ಎಂದು ಮಹೇಶರೆಡ್ಡಿ ಮುದ್ದಾಳ ಗಂಭೀರವಾಗಿ ಆರೋಪಿಸಿದ್ದಾರೆ. ಇನ್ನೂ 40 ದಿನಗಳಷ್ಟು ಬೇಸಿಗೆ ಇದೆ.ಈಗಲೇ 42,45 ಡಿಗ್ರಿ ತಾಪಮಾನವಿದೆ. ಇನ್ನೂ ಹೆಚ್ಚಾಗುವ ಸಾದ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೂ ಇದರ ಗಂಭೀರತೆಯನ್ನು ಅರಿತು ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಗೋಜಿಗೆ ಸಂಬಂಧಪಟ್ಟವರು ಹೋಗುತ್ತಿಲ್ಲ ಎಂದು ಅವರು ಇಡಿ ಮತಕ್ಷೇತ್ರದ ನೀರಿನ ಸಮಸ್ಯೆ ಕುರಿತು ವಿವರಿಸಿದ್ದಾರೆ. ಸಮಸ್ಯೆಯ ಗಂಭೀರತೆ ತಿಳಿದು ಸೋಮಾರಿತನ ಬಿಟ್ಟು ಕೆಲಸ ಮಾಡುವ ಮೂಲಕ ಜನ ಮತ್ತು ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಬೇಕೆಂದು ಶ್ರೀ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದ್ದಾರೆ.










Leave a Reply