ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಯಾಗಬೇಕು : ಶಾಸಕ ತುನ್ನೂರ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 22: ಪ್ರಸಕ್ತ ದಿನಗಳಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಕಾರಣ ಎಲ್ಲಾ ಮಹಿಳೆಯರು ಅದರ ಲಾಭ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.
ನಗರದ ತಮ್ಮ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ) ಜಿಲ್ಲೆಯಿಂದ ಯಾದಗಿರಿ ಮತಕ್ಷೇತ್ರದ ಗ್ರಾಮೀಣ ಭಾಗದ ೪೦ ಮಹಿಳಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಫಲಾನುಭವಿಗಳ ಪಟ್ಟಿ ಗಮನಿಸಿದ ಶಾಸಕ ತುನ್ನೂರ, ನನ್ನ ಮತಕ್ಷೇತ್ರ ವಿಸ್ತಾರವಾಗಿದೆ, ನೀವೂ ಕೇವಲ ಒಂದು ಭಾಗದಿಂದ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿರುವುದು ಕಂಡು ಬರುತ್ತಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿಯವರನ್ನು ತರಾಟೆಗೆ ತೆಗೆದುಕೊಂಡು, ಇನ್ನೂ ಮುಂದೆ ಯೋಜನೆಗಳ ಬಗ್ಗೆ ಎಲ್ಲಾ ಭಾಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಎಲ್ಲಾ ಭಾಗದ ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸಿ ಎಂದು ಸೂಚಿಸಿದರು,
ಮಹಿಳೆಯರು ಮೊದಲು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಲು ಆದ್ಯತೆ ನೀಡಿ, ಅವರು ಸಾಕ್ಷರಸ್ಥರು ಆದಾಗ ಮಾತ್ರ ನಿಮ್ಮ ಕುಟುಂಬದ ಸ್ಥಿತಿ ಬದಲಾವಣೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಿಗಮದ ಮೌನೇಶ, ಸುನೀಲ್, ಸಾಯಿಬಣ್ಣ ಕೆಂಗೂರಿ, ಶರಣಗೌಡ ಕುರಕುಂದಿ, ತಿಮ್ಮಣ್ಣ ನಾಯಕ, ಶರಣಗೌಡ ಬಲಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku