
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 20 : ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಬಿ.ಎನ್. ವಿಶ್ವನಾಥ್ ನಾಯಕ್, ಬಸವಣ್ಣರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ಪ್ರತಿಯೊಬ್ಬ ಜೀವಿಯ ಆತ್ಮೋದ್ಧಾರಕ್ಕೆ ದಾರಿದೀಪವಾಗಿರುವ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಅಂದಿನ ಕಾಲದಲ್ಲಿ ರಾಜ್ಯದ ಪ್ರಧಾನಿಯಾಗಿದ್ದರೂ ಬಸವಣ್ಣರು ಪ್ರಜಾಪ್ರಭುತ್ವ, ಕಾಯಕ ಮತ್ತು ಭಕ್ತಿಗೆ ಹೆಚ್ಚಿನ ಮಹತ್ವ ನೀಡಿದರು. “ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ” ಎಂಬ ವಚನಗಳ ಮೂಲಕ ಸಾಮಾನ್ಯ ಜನರಲ್ಲಿ ಆತ್ಮಜ್ಞಾನ ಮತ್ತು ಭಕ್ತಿಯ ಅರಿವು ಮೂಡಿಸಿದರು ಎಂದು ತಿಳಿಸಿದರು.
ಬಸವಣ್ಣರು ಕೇವಲ ಸಾಮಾಜಿಕ ಸುಧಾರಣೆಗೆ ಸೀಮಿತವಾಗದೇ, ಭಕ್ತಿ ಮತ್ತು ಆಡಳಿತ ಎರಡನ್ನೂ ಸಮನ್ವಯಗೊಳಿಸಿದ ಮಾರ್ಗದರ್ಶಕರಾಗಿದ್ದರು. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದು, ಲಿಂಗದೀಕ್ಷೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ನೀಡಿದರು. ಇದರಿಂದ ಬಸವಯುಗದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು ದೊರಕಿತು ಎಂದು ಹೇಳಿದರು.
ಬಾಲ್ಯದಲ್ಲೇ ಬಸವಣ್ಣರು ಕ್ರಾಂತಿಕಾರಿಯಾಗಿ ಹೊರಹೊಮ್ಮಿದ್ದು, ತಮ್ಮ ಅಕ್ಕ ನಾಗಮ್ಮನಿಗೆ ಉಪನಯನ ಅವಕಾಶ ನೀಡದ ಹಿನ್ನೆಲೆಯಲ್ಲಿ ತಾವು ಸಹ ಅದನ್ನು ನಿರಾಕರಿಸಿದ ಘಟನೆ ಅವರ ಸಮಾನತೆಯ ನಿಲುವಿಗೆ ಸಾಕ್ಷಿಯಾಗಿದೆ ಎಂದರು.
ಬಸವಣ್ಣನವರ ಆಚಾರ-ವಿಚಾರಗಳು ಹಾಗೂ ಕಾಯಕಯೋಗದ ಸಂದೇಶಗಳು ಸಮಾಜದ ಆರೋಗ್ಯಕರ ಬೆಳವಣಿಗೆಗೆ ದಾರಿದೀಪವಾಗಿದ್ದು, ಅವರ ತತ್ವಗಳು ಸದಾಕಾಲ ಅಕ್ಷಯವಾಗಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದೀಪಕ್ ಪೊದ್ದಾರ್, ಕೆ.ಬಿ. ಅರುಣ್ ಕುಮಾರ್, ಈಶಪ್ಪ ಕಪನೂರ್, ಭೀಮು ನಕ್ಕಲ್, ಗಂಗೂ ನಾಯಕ್, ಅಶೋಕ್ ಮುದ್ನಾಳ್, ನರೇಶ್ ಹೊಸಳ್ಳಿ, ನಿಂಗರಾಜ್ ಅಂಬಿಗರ್, ಅಮೀರ್ ಚೌದ್ರಿ, ಸಂತೋಷ್ ಹೊಸಳ್ಳಿ, ಶರಣು ಹೊಸಳ್ಳಿ, ಹೈಮದ್ ಚೌದ್ರಿ, ಮೈಬೂಬ್ ಪಠಾನ್ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.










Leave a Reply