ವಿಷಪೂರಿತ ಅನಿಲದಿಂದ ಸಂಕಷ್ಟ: ಕೈಗಾರಿಕೆ ವಿರುದ್ಧ ಜನರ ಆಕ್ರೋಶ

Posted by

ಸುದ್ದಿ ಬೆಳಕು ವಾರ್ತೆ

ಸೈದಾಪುರ, ಏಪ್ರಿಲ್ 17 : ಕಡೇಚೂರು–ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ರಾಸಾಯನಿಕ ಕಂಪನಿಗಳಿಂದ ಹೊರಬರುತ್ತಿರುವ ವಿಷಪೂರಿತ ಅನಿಲ ಮತ್ತು ತ್ಯಾಜ್ಯಗಳಿಂದ ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.

ದಿನೇ ದಿನೇ ಹೆಚ್ಚುತ್ತಿರುವ ದುರ್ವಾಸನೆ ಹಾಗೂ ವಾಯು ಮಾಲಿನ್ಯದಿಂದ ಜನರಲ್ಲಿ ಆತಂಕ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸ್ಥಳೀಯರು ಮತ್ತು ಸಾಮಾಜಿಕ ಹೋರಾಟಗಾರರು ಸಂಘಟಿತವಾಗಿ ಜನಜಾಗೃತಿ ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ. ಪಟ್ಟಣದ ಜಿ.ಆರ್. ಪಾರ್ಕ್‌ನಲ್ಲಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ‘ಕೈಗಾರಿಕಾ ಹಟವೋ – ಸೈದಾಪುರ ವಲಯ ಬಚಾವೋ’ ಅಭಿಯಾನದ ರೂಪರೇಷೆಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಕೆಲವು ರಾಸಾಯನಿಕ ಘಟಕಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಾತ್ರಿ ವೇಳೆ ವಿಷಕಾರಿ ಅನಿಲಗಳನ್ನು ಹೊರಬಿಡುತ್ತಿವೆ ಎಂದು ಆರೋಪಿಸಿದರು. ಇದರಿಂದ ಗ್ರಾಮಗಳಲ್ಲಿ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಉಸಿರಾಟದ ತೊಂದರೆ, ತಲೆನೋವು, ಕಣ್ಣು ಉರಿಯುವುದು ಹಾಗೂ ಚರ್ಮದ ಸಮಸ್ಯೆಗಳು ಹೆಚ್ಚುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕಾ ಹಟವೋ – ಸೈದಾಪುರ ವಲಯ ಬಚಾವೋ ಅಭಿಯಾನ
ಸಮಸ್ಯೆಯ ತೀವ್ರತೆಯನ್ನು ಗಮನಿಸಿದ ಸ್ಥಳೀಯರು, ಕೈಗಾರಿಕಾ ವಲಯದ ವಿರುದ್ಧ ಹೋರಾಟವನ್ನು ಗ್ರಾಮ ಮಟ್ಟದಲ್ಲಿ ವಿಸ್ತರಿಸಲು ನಿರ್ಧರಿಸಿದ್ದಾರೆ. ಗ್ರಾಮ ಸಭೆಗಳು, ಜಾಥಾಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಂಘಟಿತ ಹೋರಾಟ ಆರಂಭಿಸಲು ತೀರ್ಮಾನಿಸಲಾಗಿದೆ.

ಹೋರಾಟಕ್ಕೆ ಸಜ್ಜಾದ ಜನತೆ
ವಿಷಗಾಳಿ ಸಮಸ್ಯೆ ಕೇವಲ ಪರಿಸರದ ವಿಷಯವಲ್ಲ, ಜನರ ಆರೋಗ್ಯ ಮತ್ತು ಬದುಕಿನ ಪ್ರಶ್ನೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟರು. ಸಮಸ್ಯೆ ಪರಿಹಾರವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿ, ಅಗತ್ಯವಿದ್ದಲ್ಲಿ ಪ್ರತಿಭಟನೆ, ರಸ್ತೆತಡೆ, ಧರಣಿ ಸೇರಿದಂತೆ ಕಾನೂನುಬದ್ಧ ಹೋರಾಟಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಆರ್ಯವೈಶ್ಯ ಸೇವಾ ಸಂಘದ ಅಧ್ಯಕ್ಷ ಕೃಷ್ಣಯ್ಯ ಗುಜ್ಜಾ ಸೇರಿದಂತೆ ಹಲವು ಗ್ರಾಮಗಳ ಮುಖಂಡರು, ಯುವಕರು ಹಾಗೂ ಪರಿಸರ ಹೋರಾಟಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku