
ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ಸಂಭವಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ Siddaramaiah ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದಲ್ಲಿ ನಡೆದ ಕುಡಿಯುವ ನೀರು ಪೂರೈಕೆ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ಆಗಸ್ಟ್ನಲ್ಲಿ ಸಾಮಾನ್ಯ ಮಳೆ ಹಾಗೂ ಸೆಪ್ಟೆಂಬರ್ನಲ್ಲಿ ಕಡಿಮೆ ಮಳೆಯ ನಿರೀಕ್ಷೆಯಿದೆ ಎಂದು ತಿಳಿಸಲಾಯಿತು.
ಕುಡಿಯುವ ನೀರಿಗೆ ತೊಂದರೆ: ಜಿಲ್ಲಾಧಿಕಾರಿಗಳೇ ಹೊಣೆ
ಕುಡಿಯುವ ನೀರಿಗೆ ತೊಂದರೆ ಉಂಟಾದರೆ ಸಂಬಂಧಿತ ಜಿಲ್ಲಾಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಅನುದಾನ ಕೊರತೆಯಿಲ್ಲ
ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅನುದಾನದ ಕೊರತೆಯಿಲ್ಲ. ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಸಾರ್ವಜನಿಕರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
114 ತಾಲೂಕುಗಳಲ್ಲಿ ಈಗಲೇ ಸಮಸ್ಯೆ
ರಾಜ್ಯದಲ್ಲಿ 213 ತಾಲೂಕುಗಳು ಮತ್ತು 2410 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಗುರುತಿಸಲಾಗಿದೆ. ಪ್ರಸ್ತುತ 114 ತಾಲೂಕುಗಳ 598 ಗ್ರಾಮ ಪಂಚಾಯತ್ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
137 ಗ್ರಾಮಗಳಿಗೆ 129 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 585 ಖಾಸಗಿ ಬೋರ್ವೆಲ್ಗಳ ಮೂಲಕ 515 ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ.
ನಗರ ಪ್ರದೇಶಗಳಲ್ಲೂ ಆತಂಕ
27 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಸಮಸ್ಯೆ ಇದ್ದು, 95 ನಗರಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 145 ವಾರ್ಡ್ಗಳಿಗೆ 57 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ನಡೆಯುತ್ತಿದೆ.
ಜಲಾಶಯಗಳಲ್ಲಿ ನೀರಿನ ಲಭ್ಯತೆ
ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 321.93 ಟಿಎಂಸಿ ನೀರು ಲಭ್ಯವಿದ್ದು, ಇದು ಒಟ್ಟು ಸಾಮರ್ಥ್ಯದ ಶೇ.36ರಷ್ಟಾಗಿದೆ. ಜುಲೈ ಮಧ್ಯದವರೆಗೆ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಬೇಕು ಎಂದು ಸೂಚಿಸಿದರು.
ಪ್ರಮುಖ ಸೂಚನೆಗಳು:
- ಟ್ಯಾಂಕರ್ ಬಳಕೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ
- ಖಾಸಗಿ ಬೋರ್ವೆಲ್ಗಳಿಗೆ ಆದ್ಯತೆ
- ಅಗತ್ಯವಿದ್ದರೆ ಹೊಸ ಕೊಳವೆ ಬಾವಿ ಕೊರೆಯುವುದು
- ನಿಯಂತ್ರಣ ಕೊಠಡಿಗಳ ಸ್ಥಾಪನೆ
- ಆರ್ಒ ಘಟಕಗಳು 24 ಗಂಟೆ ಕಾರ್ಯನಿರ್ವಹಣೆ
- ಕಲುಷಿತ ನೀರು ಪೂರೈಕೆ ತಪ್ಪಿಸುವುದು
ರಸಗೊಬ್ಬರ ಪೂರೈಕೆಗೂ ಎಚ್ಚರಿಕೆ
ಮಧ್ಯಪ್ರಾಚ್ಯ ಪರಿಸ್ಥಿತಿಯಿಂದ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ ಇರುವುದರಿಂದ ಯೂರಿಯಾ, ಡಿಎಪಿ ಸರಿಯಾದ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಅಕ್ರಮ ಸಂಗ್ರಹ ಮತ್ತು ರಾಜ್ಯದ ಹೊರಗೆ ಸಾಗಾಟವನ್ನು ತಡೆಯಲು ಚೆಕ್ಪೋಸ್ಟ್ಗಳಲ್ಲಿ ನಿಗಾ ಬಿಗಿಗೊಳಿಸಲು ಸೂಚಿಸಿದರು.
ಮೇವಿನ ಲಭ್ಯತೆ ಪರಿಶೀಲನೆ
ಈಗ ಮೇವಿನ ಕೊರತೆ ಇಲ್ಲದಿದ್ದರೂ ನಿರ್ಲಕ್ಷ್ಯ ವಹಿಸದೆ ಮುಂದಿನ ಅವಶ್ಯಕತೆಗಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಾಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಸಿ ವರದಿ ಸಲ್ಲಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.










Leave a Reply