7,500 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಜೆಡಿಎಸ್ ಒತ್ತಾಯ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿರುವ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಜಾತ್ಯತೀತ ಜನತಾದಳದ (ಜೆಡಿಎಸ್) ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ಕಾಂಗ್ರೆಸ್ ಸರ್ಕಾರವು ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿಯಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ ಬೃಹತ್ ರಿಯಲ್ ಎಸ್ಟೇಟ್ ದಂಧೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೊದಲ ಹಂತದಲ್ಲಿ ವಶಪಡಿಸಿಕೊಳ್ಳಲು ಹೊರಟಿರುವ 498.34 ಎಕರೆ ಫಲವತ್ತಾದ ಕೃಷಿ ಭೂಮಿಯಿಂದಾಗಿ ಒಟ್ಟು 755 ರೈತ ಕುಟುಂಬಗಳು ಬೀದಿಗೆ ಬೀಳುತ್ತಿದ್ದು, ಇದರಲ್ಲಿ ಬರೋಬ್ಬರಿ 614 ರೈತರು (ಶೇ. 81 ಕ್ಕೂ ಹೆಚ್ಚು) ಕೇವಲ 1 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅತಿ ಸಣ್ಣ ಕೃಷಿಕರಾಗಿದ್ದಾರೆ. ಇದಲ್ಲದೆ, ಮುಂದಿನ ತಿಂಗಳ ಒಳಗಾಗಿ ಇಡೀ ಬಿಡದಿ ಭಾಗದ ಬರೋಬ್ಬರಿ 7481 ರಿಂದ 9600 ಎಕರೆ ವರೆಗಿನ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವ ಕರಾಳ ಸಂಚು ರೂಪಿಸಲಾಗಿದೆ. ಈ ಯೋಜನೆಯಿಂದಾಗಿ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ ಬರೋಬ್ಬರಿ 6 ಲಕ್ಷ ಲೀಟರ್ ಹಾಲು ಸಂಪೂರ್ಣವಾಗಿ ನಿಂತುಹೋಗಲಿದ್ದು, ಹೈನುಗಾರಿಕೆ ಮತ್ತು ಶೇ. 50 ಕ್ಕೂ ಹೆಚ್ಚು ಕುಟುಂಬಗಳು ನಂಬಿಕೊಂಡಿರುವ ರೇಷ್ಮೆ ಕೃಷಿ ಉದ್ಯಮ ಸಂಪೂರ್ಣ ನಾಶವಾಗಲಿದೆ.

ರೈತರ ಭೂಮಿಯನ್ನು ಕನಿಷ್ಠ ಬೆಲೆಗೆ ಕಸಿದುಕೊಂಡು ಬರೋಬ್ಬರಿ 33,562 ಕೋಟಿ ರೂಪಾಯಿಗಳ ಬೃಹತ್ ಹಗರಣಕ್ಕೆ ಸರ್ಕಾರ ಮುಂದಾಗಿದ್ದು, ನಿಯಮಗಳ ಪ್ರಕಾರ ನಡೆಸಬೇಕಾದ ಸಾಮಾಜಿಕ ಮತ್ತು ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಬೈಪಾಸ್ ಮಾಡಿ, ಸ್ಮಾರ್ಟ್ ಸಿಟಿ ಹೆಸರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಹಸಿರು ಮರಗಳನ್ನು ಕತ್ತರಿಸಿ ಪರಿಸರ ಸಮತೋಲನವನ್ನು ನಾಶ ಮಾಡಲು ಹೊರಟಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಹಿನ್ನೆಲೆಯಲ್ಲಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿ ವಶಪಡಿಸಿಕೊಳ್ಳಲು ಹೊರಡಿಸಿರುವ ಕರಾಳ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು, ಮುಂದಿನ ತಿಂಗಳು ಜಾರಿಗೆ ತರಲು ഉദ്ೇಶಿಸಿರುವ 7,500ಕ್ಕೂ ಹೆಚ್ಚು ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು, ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಯನ್ನು ನಂಬಿಕೊಂಡಿರುವ ಬಡ ರೈತ ಕುಟುಂಬಗಳ ಜೀವನೋಪಾಯವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಅನುಮತಿ ನೀಡಬೇಕು ಮತ್ತು ಸಾರ್ವಜನಿಕ ಆಸ್ತಿಗಳಾದ ಸಿ.ಎ ನಿವೇಶನಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಿರುವ ಆರ್ಥಿಕ ದುರ್ನೀತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರರಾದ ಮಲ್ಲಣ್ಣಗೌಡ ಕೌಳೂರು, ಪ್ರಮುಖರಾದ ಬಂದಪ್ಪ ಅರಳಿ, ಆನಂದ್ ವಡವಾಟ್, ಮಲ್ಲಿಕಾರ್ಜುನ ಅರುಣಿ, ನರಸಿಂಹರೆಡ್ಡಿ ಚಿಂತಗುಂಟಾ, ತಾಯಪ್ಪ ಬದ್ದೇಪಲ್ಲಿ, ಶರಣಪ್ಪಗೌಡ ಹೊಸಳ್ಳಿ, ಭೀಮರಾಯ ಬಾಚವಾರ, ಭೀಮಲಿಂಗಪ್ಪ, ನಾಗಲಿಂಗಪ್ಪ ಹೊನಗೇರಾ, ಭೀಮಣ್ಣ ಯಂಪಾಡ, ಕಿಶನ್, ಪ್ರಕಾಶ್, ಯಲ್ಲಾಲಿಂಗ ಚಾಮನಹಳ್ಳಿ,ಬಸ್ಸು ಸಾಹುಕಾರ್, ಮಲ್ಲಣ್ಣಗೌಡ ಪಸ್ಫುಲ್ ಸೇರಿದಂತೆ ಪಕ್ಷದ ಇನ್ನಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku