ಸ್ವಚ್ಛ ಭಾರತ–ಸ್ವಸ್ಥ ಭಾರತ ಘೋಷಣೆಯಡಿ ಎನ್‌ಎಸ್‌ಎಸ್ ವಿಶೇಷ ಶ್ರಮದಾನ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು :  ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವು ದತ್ತು ಗ್ರಾಮ ಮಟಮಾರಿಯಲ್ಲಿ ಆಯೋಜಿಸಿರುವ 2025–26ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ “ಸ್ವಚ್ಛ ಭಾರತ–ಸ್ವಸ್ಥ ಭಾರತ” ಘೋಷಣೆಯಡಿ ವಿಶೇಷ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತು.
“ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಶಿಬಿರದ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಸ್ವಯಂಸೇವಕಿಯರು ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಬಸ್ ನಿಲ್ದಾಣ, ಸರ್ಕಾರಿ ಪ್ರಾಥಮಿಕ ಶಾಲೆ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ತೇರುಬೀದಿ ಸರ್ಕಾರಿ ಶಾಲೆ, ತರಕಾರಿ ಮಾರುಕಟ್ಟೆ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಗ್ರಾಮ ಪಂಚಾಯಿತಿ ಆವರಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಸ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಶಿಬಿರಾಧಿಕಾರಿಯಾಗಿರುವ ಡಾ. ಸಂತೋಷಕುಮಾರ ರೇವೂರ ಮಾತನಾಡಿ, “ಸ್ವಚ್ಛತೆ ಗ್ರಾಮ ಸೌಂದರ್ಯಕ್ಕಷ್ಟೇ ಸೀಮಿತವಲ್ಲ, ಅದು ಜನರ ಆರೋಗ್ಯಕ್ಕೂ ಅತ್ಯವಶ್ಯಕ. ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸ್ವಚ್ಛ ಗ್ರಾಮಗಳ ನಿರ್ಮಾಣವೇ ಸ್ವಸ್ಥ ರಾಷ್ಟ್ರದ ಅಡಿಪಾಯವಾಗಬೇಕು” ಎಂದು ಹೇಳಿದರು.
ಸಹಾಯಕ ಶಿಬಿರಾಧಿಕಾರಿ ಡಾ. ವೀರಾಂಜನೇಯ ಸೇರಿದಂತೆ ಎಲ್ಲಾ ಶಿಬಿರಾರ್ಥಿಗಳು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿದ್ಯಾರ್ಥಿನಿಯರ ಸೇವಾಮನೋಭಾವ ಹಾಗೂ ಕಾರ್ಯೋತ್ಸಾಹವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. “ಸ್ವಚ್ಛತೆಯೇ ಸೇವೆ” ಎಂಬ ಸಂದೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

Leave a Reply

Your email address will not be published. Required fields are marked *

Suddi Belaku