ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡಲು – ಎನ್. ರವಿಕುಮಾರ್ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಬೆಂಗಳೂರು : ಕಲಬುರಗಿಯಲ್ಲಿ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿ ಬಂಧಿಸಿ ಎಫ್ಐಕಆರ್ ದಾಖಲಿಸಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು ಆಗ್ರಹಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ತಳವಾರ ಸಮುದಾಯಕ್ಕೆ ಎಸ್ಟಿಕ ಪ್ರಮಾಣಪತ್ರ ಕೊಡುತ್ತಿಲ್ಲ ಎಂದು ಆ ಸಮುದಾಯದ ಅನೇಕ ಯುವಕರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಇದೇ ಬೇಡಿಕೆ ಇಟ್ಟುಕೊಂಡು ಬಹಳ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ಮೂರು ತಿಂಗಳ ಹಿಂದೆಯೂ ಇದೇ ವಿಷಯಕ್ಕೆ ಹೋರಾಟ ಆಗಿತ್ತು. ಆಗಲೂ ನಾನು ಭಾಗವಹಿಸಿದ್ದೆ ಎಂದು ಹೇಳಿದರು. ಈಗ ಮತ್ತೆ ಹೋರಾಟ ಆರಂಭವಾಗಿದೆ. ರಾತ್ರಿಯೂ ಧರಣಿ ನಡೆಸುತ್ತಿದ್ದಾಗ ಯುವಕರನ್ನು ಬಂಧಿಸಿ ಕರೆದೊಯ್ದು ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಹೋರಾಟ ನಡೆಯುತ್ತಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ರಾಜಕೀಯ ಕಾರಣಕ್ಕೆ ಹೋರಾಟ ಮಾಡ್ತಿದ್ದಾರೆ. ಪ್ರಮಾಣಪತ್ರ ಕೊಡ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ. ಹಾಗಾದರೆ ಪ್ರಮಾಣಪತ್ರ ನೀಡುತ್ತಿದ್ದರೆ ಯಾಕೆ ಪ್ರತಿಭಟನೆ ನಡೆಯುತ್ತಿತ್ತು ಎಂದು ಕೇಳಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ಜಗತ್ತಿಗೆ ಬೋಧನೆ ಮಾಡುವುದನ್ನು ಬಿಟ್ಟು ತಮ್ಮ ಕ್ಷೇತ್ರದಲ್ಲಿ ಆಗುವ ಯಾವುದೇ ಸಮಸ್ಯೆಯನ್ನು ಪರಿಹರಿಸಲಿ. ಈ ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲೇ ಎಚ್ಚೆತ್ತುಕೊಂಡು ರ್ಹರಿಗೆ ನ್ಯಾಯಯುತವಾಗಿ ಎಸ್ಟಿ ಪ್ರಮಾಣ ಪತ್ರ ಕೊಡಬೇಕು. ಇಲ್ಲದೇ ಇದ್ದರೆ ಹೋರಾಟ ತೀವ್ರವಾಗುತ್ತೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಕಾನೂನು ಪ್ರಕಾರ ಆಡಳಿತ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರೆಂದು ಕೇಳಬಾರದು. ಸರಕಾರದ ನಿಯಮಗಳ ಪ್ರಕಾರವೇ ಅಧಿಕಾರಿಗಳು ಕೆಲಸ ಮಾಡಬೇಕು ಮತ್ತು ನಿರ್ಧಾರ ಕೈಗೊಳ್ಳಬೇಕು ಎಂದರು.

ಎಸ್ಟಿರ ಪ್ರಮಾಣಪತ್ರಕ್ಕಾಗಿ ಎಲ್ಲರೂ ಸೇರಿ ಕೇವಲ ತಮ್ಮ ಸ್ವಂತ ಹಿತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ಪ್ರಮಾಣಪತ್ರ ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಉದ್ಯೋಗಕ್ಕಾಗಿ, ಶಾಲಾ ಕಾಲೇಜು ದಾಖಲಾತಿಗೆ ಪ್ರಮಾಣಪತ್ರ ಸಲ್ಲಿಸಲು ಪ್ರತಿಭಟನೆ ನಡೆಯುತ್ತಿದೆ. ಬಂಧಿಸಿ ಬಿಡುಗಡೆ ಮಾಡಿದವರ ಮೇಲಿನ ಎಫ್ಐ ಆರ್ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

Suddi Belaku