ಸ್ಥಳಿಯ ಕಾಂಗ್ರೆಸ್ ನಾಯಕರಿಗೆ ಕಟಕಟಿ ಕಿವಿಮಾತು

Posted by

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ ಜಲಾಶಯದ ನಾಲೆಗಳ ಆಧುನಿಕರಣ ಕೆಲಸದ ಕುರಿತು ಜಿಲ್ಲಾ ಕಾಂಗ್ರೆಸ್‌ನ ಕೆಲ ಸ್ಥಳೀಯ ಮುಖಂಡರು ಸತ್ಯಾಸತ್ಯತೆ ತಿಳಿದುಕೊಂಡು ಹೇಳಿಕೆ ನೀಡುವುದು ಉತ್ತಮವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ಕಿವಿ ಮಾತು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ನಾಲ್ಕು ದಿನಗಳ ಹಿಂದೇ ರಾಜ್ಯ ಸರ್ಕಾರ ಈ ಕೆಲಸಕ್ಕೆ ಆಡಳಿತ ಅನುಮೋದನೆ ನೀಡಿದ್ದೇ ತಡ, ಇಲ್ಲಿಯ ಕೆಲ ಕಾಂಗ್ರೆಸ್ ಮುಖಂಡರು ಇದನ್ನೇ ಬಂಡವಾಳ ಮಾಡಿಕೊಂಡು, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ. ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿಕೆಗಳು ನೀಡುವ ಮೂಲಕ ಜಿಲ್ಲೆಯ ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ತಪ್ಪು ಎಂದಿದ್ದಾರೆ.
ಹತ್ತಿಕುಣಿ ಜಲಾಶಯ ವ್ಯಾಪ್ತಿಯ ರೈತರ ಬಹುದಿನಗಳ ಬೇಡಿಕೆಯಂತೆಯೇ ಶಾಸಕ ಶರಣಗೌಡ ಕಂದಕೂರ ಅವರು, ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ, ಈ ಕೆಲಸದ ಮಹತ್ವದ ಬಗ್ಗೆ ವಿವರಿಸಿದಾಗ ಅವರು ಅದನ್ನು ಪುರಸ್ಕೃರಿಸಿ ಕೇಂದ್ರ ಸರ್ಕಾರದಿಂದಲೇ 72 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಇಂತಹ ಮಹತ್ವದ ಕೆಲಸಕ್ಕೆ ಈ ಇಬ್ಬರು ಪ್ರಮುಖವಾಗಿ ಕಾರಣರಾಗಿದ್ದಾರೆ ಎಂಬುವುದು ಅಂತಿಮ ಸತ್ಯ ಎಂದು ಸುಭಾಷಚಂದ್ರ ಕಟಕಟಿ ಟಾಂಗ್ ನೀಡಿದ್ದಾರೆ.
ಇದು ಒಂದು ಕಡೆಯಾದರೇ ಕೇಂದ್ರ ಸರ್ಕಾರದಿಂದ ಯಾವುದೇ ಕೆಲಸ ಮತ್ತು ಅನುದಾನ ಮಂಜೂರು ಆದ ನಂತರ ಅದನ್ನು ಜಾರಿಗೆ ತರುವುದು ರಾಜ್ಯ ಸರ್ಕಾರದ ಕೆಲಸ. ಅದರಂತೆಯೇ ಹತ್ತಿಕುಣಿ ಜಲಾಶಯದ ನಾಲೆಗಳು ಆಧುನಿಕರಣಕ್ಕೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ ಅವರು ಶ್ರಮವಿರುವುದು ಎಲ್ಲರೂ ಒಪ್ಪುವ ಮಾತು. ಇದಕ್ಕೆ ಎಳ್ಳಷ್ಟು ಸಂಬಂಧವೇ ಇಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಇಲ್ಲಿನ ಕೆಲವರು ಹೇಳಿಕೊಳ್ಳುತ್ತಿರುವುದು ಯಾವ ನ್ಯಾಯವೆಂದು ಕಟಕಟೆ ಪ್ರಶ್ನಿಸಿದ್ದಾರೆ.
ಗುರುಮಠಕಲ್ ಕ್ಷೇತ್ರದ ಜನತೆಯ ಋಣ ನಮ್ಮ ಕಟುಂಬದ ಮೇಲೆ ಇದೆ ಎಂದು ಅಧಿವೇಶನದಲ್ಲಿಯೇ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ, ಆದರೇ ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ನೈಯಾಪೈಸೆ ಅನುದಾನ ನೀಡಿಲ್ಲ. ಕುಡಿಯುವ ನೀರಿಗಾಗಿ ಜನರು‌ ಪರಿತಪಿಸುತ್ತಿದ್ದಾರೆ. ಹಿಂದೇ ಕೊರೆಯಿಸಿದ ಬೊರವೆಲ್ ಗಳ ಬಿಲ್ ಚುಕ್ತಾ ಮಾಡಿಲ್ಲ. ಪರಸ್ಥಿತಿ ಹೀಗಿರುವಾಗ ಕೆಲ ಸ್ಥಳಿಯ ಕಾಂಗ್ರೆಸ್ ಮುಖಂಡರು, ಸತ್ಯ ಮರೆಮಾಚಿ ಸುಳ್ಳನ್ನು ವೈಭವಿಕರಿಸುವ ಕೆಲಸ ಕೂಡಲೇ ನಿಲ್ಲಿಸಲಿ ಎಂದು ಸುಭಾಷ ಚಂದ್ರ ಕಟಕಟಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku